ಸೋಲು-ಅವಮಾನ
ಸ್ವಕಾರ್ಯಮುದ್ಧರೆ ತ್ರಾಜ್ಜ್: ಕಾರ್ಯದ್ವಂಸೋ ಹಿ ಮೂರ್ಖತಾ ||
ಈ ಕೆಲಸದಿಂದ ಅವಮಾನವಾಯಿತು,, ಮುಂದೆ ಹೀಗಾಗಬಹುದು ಹಾಗಾಗಬಹುದು ಎಂದು ಇಲ್ಲದ್ದನ್ನೆಲ್ಲಾ ಕಲ್ಪಿಸಿಕೊಂಡು ಹೆದರಿ, ಕೈಗೊಂಡ ಕೆಲಸವನ್ನು ಕೈಬಿಟ್ಟರೆ, ಅಜೀರ್ಣವಾಗಬಹುದೆಂಬ ಭಯದಿಂದ ಊಟವನ್ನೇ ತ್ಯಜಿಸಿದಂತಹ ಮೂರ್ಖತನವಾಗುತ್ತದೆ.
ಆದ್ದರಿಂದ ಆದ ಸೋಲನ್ನು ಸವಾಲಾಗಿ ಸ್ವೀಕರಿಸಿ ಅದಕ್ಕ ಕಾರಣಗಳನ್ನು ಹುಡುಕಿಕೊಂಡು ಮುಂದೆ ಅದು ಆಗದಂತೆ ನಡೆಯಬೇಕು.ಕಾರಣಗಳು ನಮ್ಮಲ್ಲೇ ಇರಬಹುದು ಇಲ್ಲ ಹೊರಗಿನವು ಆಗಿರಬಹುದು.ಬೇರೆಯವರ ದುರ್ವರ್ತನೆ ಪಿತೂರಿ ಇತ್ಯಾದಿಗಳು.ಏನಾಗಲಿ ಮುಂದೆ ಸಾಗು ನೀ ಎಂದು ಜೀವನ ಮುಂದಕ್ಕೆ ಸಾಗುತ್ತಿರಬೇಕು.
ಸಂಪ್ರಾಪ್ತಮವಮಾನಂ ಯಸ್ತೇಜಸಾ ನ ಪ್ರಮಾರ್ಜತಿ|
ಕಸ್ತಸ್ಯ ಪುರುಷಾರ್ಥೋಸ್ತಿ ಪುರುಷ ಸ್ಯಾಲ್ಪತೇಜಸ್:
ಪ್ರಾಪ್ತವಾದ ಅವಮಾನವನ್ನು ಯಾರು ತನ್ನ ತೆಜಸ್ಸಿನಿಂದ ಅಂದರೆ ತನ್ನ ಸ್ವ ಶಕ್ತಿಯಿಂದ ಅಳಿಸಿ ಹಾಕಲಾರನೋ ಅಂತಹ ತೇಜೋಹೀನನಿಗೆ ಯಾವ ಪುರುಷರ್ಥವೂ ಕೈಗೂಡುವುದಿಲ್ಲ.
ನಮ್ಮ ಜೀವನ ಹೂವಿನ ಹಾಸಿಗೆಯಲ್ಲ. ಹೂವೌಗಳಲ್ಲೂ ಮುಳ್ಳುಗಳಿವೆ...
ಕಷ್ಟ ಸುಖ ನೋವು ನಲಿವು ಸರಸ ವಿರಸ ಇದ್ದಾಗಲೇ ಬಾಳು ಚೆನ್ನ. ನಮ್ಮ ನಿತ್ಯದ ಊಟದಲ್ಲಿ ಉಪ್ಪು, ಖಾರ, ಸಿಹಿ, ಕಹಿ, ಒಗರು ಇತ್ಯಾದಿ ಷಡ್ರಸಗಳಿದ್ದಾಗಲೇ ಊಟ ರುಚಿಕರ, ಆರೋಗ್ಯಕರವಾಗಿರುತ್ತದೆ.
ಕಹಿ ಇರುವುದರಿಂದ ಸಿಹಿಗೆ, ಅಪಜಯವಿರುವುದರಿಂದ ಜಯಕ್ಕೆ, ಅವಮಾನವಿರುವುದರಿಂದ ಸನ್ಮಾನಕ್ಕೆ ಬೆಲೆ ಬಂದಿದೆ.
"ಸುಖೇ ದು:ಖೇ ಸಮೇ ಕೃತ್ವ ಲಾಭಾಲಾಭೌ ಜಯಾಜಯೌ"
- ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ.
ನಮ್ಮ ಬದುಕಿನಲ್ಲಿ ಕಲಿಯಲೇಬೇಕಾದ ಮುಖ್ಯ ಪಾಠವೆಂದರೆ ಕಷ್ಟ-ಸುಖ, ಅವಮಾನ-ಸನ್ಮಾನಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಠಿತಿ.ಇವೆಲ್ಲ ಚಕ್ರದ ಮೇಲಿರುವ ಒಂದು ಬಿಂದುವಿನಂತೆ ಮೇಲೂ ಹೋಗುತ್ತದೆ ಕೆಳಗೂ ಬರುತ್ತದೆ.ಎರಡಕ್ಕೂ ನಾವು ಸಿದ್ಧರಾಗಿರಬೇಕು.
ಒಮ್ಮೆ ಅವಮಾನಕ್ಕೆ ಗುರಿಯಾದ ವ್ಯಕ್ತಿ ಮತ್ತೊಮ್ಮೆ ಅಂತಹ ಅವಮಾನಕ್ಕೆ ಗುರಿಯಾಗಬಾರದೆಂದು ತನ್ನ ರೀತಿ ನೀತಿಗಳನ್ನು ತಿದ್ದಿಕೊಳ್ಳುತ್ತಾನೆ.ಆದ್ದರಿಂದ ಅವಮಾನ ಆ ವ್ಯಕ್ತಿಗೆ ಒಳಿತನ್ನೇ ಮಾಡುತ್ತದೆ ಎಂದಿದ್ದಾರೆ ಪುರಂದರದಾಸರು.
ಎಷ್ಟೋ ಜನ ನಿರಪರಾಧಿಗಳು ಶಿಕ್ಷೆ ಅನುಭವಿಸುತ್ತಿರುವುದುಂಟು.ಯಾರದೋ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಅದು.
ಒಬ್ಬ ಚಾಲಕನು ತಾನು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದರೂ ಯಾರದೋ ತಪ್ಪಿಂದ ಅಪಘಾತವಾಗಿ ತೊಂದರೆ ನುಭವಿಸಬಹುದು.ಇಂತಹ ಪರಿಸ್ಥಿತಿಗಳಲ್ಲಿ ಯಾರನ್ನು ದೂರುವುದು. ಎಲ್ಲಾ ಕರ್ಮಫಲ.